ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಅಪೂರ್ವ ಯಕ್ಷಸಾಧಕ ಜಲವಳ್ಳಿಯವರಿಗೆ ಯಕ್ಷದೇಗುಲ-2015 ರ ಪುರಸ್ಕಾರ

ಲೇಖಕರು :
ಕೋಟ ಸುದರ್ಶನ ಉರಾಳ
ಬುಧವಾರ, ಡಿಸೆ೦ಬರ್ 23 , 2015

ಯಕ್ಷಗಾನ ಕಲಾವಲಯದಲ್ಲಿ ‘ಬಡಾಬಡಗು ತಿಟ್ಟು’ ಎಂಬ ಪ್ರಕಾರ ಅನನ್ಯತೆಯ ನೆಲವಾದ ಉತ್ತರಕನ್ನಡ ಜಿಲ್ಲೆಯ ಹಲವಾರು ಯಕ್ಷಸಾಧಕರಲ್ಲಿ ಕ್ಷೇತ್ರಕ್ಕೆ ವಿಶೇಷ ಕೊಡುಗೆಗಳನ್ನು ನೀಡಿದವರಿದ್ದಾರೆ. ಸೀಮಿತ ವೃತ್ತಿ ಮೇಳಗಳ ಮತ್ತು ಪ್ರದರ್ಶನ ಸಾಧ್ಯತೆಗಳ ಅವಕಾಶಗಳನ್ನೇ ಬಳಸಿಕೊಂಡು ತಮ್ಮ ಪ್ರತಿಭಾ ಸಂಪನ್ನತೆಯಿಂದ ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಖ್ಯಾತಿಯನ್ನು ಹೊಂದಿದವರಿದ್ದಾರೆ. ಯಕ್ಷಕಲೆಯನ್ನೇ ಉಸಿರಾಗಿಸಿಕೊಂಡು ನಿಷ್ಟೆಯಿಂದ ಕಲೆಯ ಪ್ರಸರಣಕ್ಕೆ ಶ್ರಮಿಸಿದವರಿದ್ದಾರೆ. ವೈಯಕ್ತಿಕ ಕಾಂಕ್ಷೆಗಳನ್ನು ಬದಿಗೊತ್ತಿ ಯಕ್ಷಗಾನ ಕಲೆಯ ಆಳವಾದ ಜ್ಞಾನವನ್ನು ಸಿದ್ಧಿಸಿಕೊಂಡು ಸಂಶೋಧನ ಪ್ರವೃತ್ತಿಯನ್ನು ಬೆಳೆಸಿಕೊಂಡವರಿದ್ದಾರೆ.

ಕಲೆಯನ್ನು ‘ಅರ್ಥ’ ಮೂಲವನ್ನಾಗಿಸಿಕೊಳ್ಳದೇ ತಪಸ್ಸಿನಂತೆ ಸ್ವೀಕರಿಸಿದ ಅವಧೂತರಿದ್ದಾರೆ. ಅಂಥವರ ಸಾಲಿನಲ್ಲಿ ಅಪೂರ್ವ ಸಾಧಕರಾಗಿ ಮಾನಿಸಲ್ಪಡುವವರು ಹೊನ್ನಾವರದ ಜಲವಳ್ಳಿ ವೆಂಕಟೇಶ್ ರಾವ್ ಅವರು. ಯಕ್ಷಗಾನ ಕಲೆಯ ಪಾರಂಪರಿಕ ಅನುಭವ, ಶಾಸ್ತ್ರಬದ್ಧ ಕಲಿಕೆ, ಪುರಾಣ ಜ್ಞಾನ, ಪಾತ್ರ ಪರಿಕಲ್ಪನೆ, ಸನ್ನಿವೇಷ ಸೃಷ್ಟಿ, ವೇಷ ಸೌಂದರ್ಯದ ಕುರಿತು ಗಂಭೀರ ಚಿಂತನೆಗಳನ್ನು ಮೇಳೈಸಿಕೊಂಡು ಪರಿಪೂರ್ಣ ಕಲಾವಿದರಾಗಿ ರೂಪುಗೊಂಡ ಜಲವಳ್ಳಿಯವರು ಎತ್ತರದ ನಿಲುವಿನ ಆಕರ್ಷಕ ವೇಷ, ವೇಷಕ್ಕೊಪ್ಪುವ ಕುಣಿತ, ಸಭಿಕರ ಗಮನವನ್ನು ಸೆಳೆಯುವ ಸ್ವರಭಾವ, ಎರಡನೇ ವೇಷದ ಗತ್ತು-ಗೈರತ್ತು, ಅತಿ ಎನಿಸದ ಮಿತವಾದ ರಂಗ ಸಂಚಾರಗಳ ಮೂಲಕ ಯಕ್ಷರಂಗದಲ್ಲಿ ತನ್ನದೇ ಛಾಪು ಮೂಡಿಸಿ ಅಭಿಜಾತ ಕಲಾವಿದರೆನಿಸಿಕೊಂಡವರು.

ಶ್ರೀ ಬೊಮ್ಮ ಮಡಿವಾಳ ಮತ್ತು ಶ್ರೀಮತಿ ದೇವಿ ದಂಪತಿಗಳ ಪ್ರಥಮ ಪುತ್ರರಾಗಿ 1933ರಲ್ಲಿ ಜಲವಳ್ಳಿಯಲ್ಲಿ ಜನಿಸಿದ ವೆಂಕಟೇಶ್ ರಾವ್ ಅವರು 2ನೇ ತರಗತಿಗೇ ಸಾಮಾನ್ಯ ಶಿಕ್ಷಣಕ್ಕೆ ವಿದಾಯ ಹೇಳಿ ಯಕ್ಷಕಲಾ ಸಿದ್ಧಿಯಿಂದ ತನ್ನ ಹುಟ್ಟಿದೂರಿನ ಪ್ರಸಿದ್ಧಿಗೆ ಕಾರಣರಾದವರು. ಲೋಕ ಶಿಕ್ಷಣ ಪಾಠಶಾಲೆಯಲ್ಲಿ ಜೀವನದ ಪಾಠಗಳನ್ನು ಕಲಿಯುತ್ತಾ ತನ್ನ ಹದಿನಾರನೇ ವಯಸ್ಸಿನಲ್ಲಿಯೇ ಶ್ರೀಕ್ಷೇತ್ರ ಗುಂಡಬಾಳ ಮೇಳದಲ್ಲಿ ಕಲಾದೀಕ್ಷೆಯನ್ನು ಪಡೆದು ಯಕ್ಷ ಸಂಚಾರಕ್ಕೆ ಹೊರಟು ನಿಂತವರು ಅಲ್ಲಿ ಕೆಲವು ಕಾಲ ಯಕ್ಷ ಶಿಕ್ಷಣವನ್ನು ಪಡೆದು ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ಪರಿಣತಿಯನ್ನು ಪಡೆದು ಯಕ್ಷಗಾನವನ್ನು ಬದುಕಾಗಿಸಿಕೊಂಡರು. ಮುಂದೆ ಇಡಗುಂಜಿ ಮೇಳ, ಕೊಳಗೀಬೀಸ್ ಮೇಳ, ತೆಂಕಿನ ಸುರತ್ಕಲ್ ಮೇಳಗಳಲ್ಲಿ ಕೆಲವು ವರ್ಷ ತಿರುಗಾಟವನ್ನು ಪೂರೈಸಿ, ಬಡಗಿನ ಗಜಮೇಳವೆನಿಸಿಕೊಂಡ ಸಾಲಿಗ್ರಾಮ ಮೇಳದಲ್ಲಿ ಸುದೀರ್ಘ 25 ವರ್ಷಗಳ ಕಾಲ ಕಲಾಮಾತೆಯ ಸೇವೆಗೈದರು. ನಂತರ ಶ್ರೀ ಅಮೃತೇಶ್ವರೀ ಮೇಳ, ಶ್ರೀಕಮಲಶಿಲೆ ಮುಂತಾದ ಮೇಳಗಳಲ್ಲಿ ಕಲಾವಿದರಾಗಿ ದುಡಿದ ಜಲವಳ್ಳಿಯವರು ಆರು ದಶಕಗಳ ಕಾಲ ವೃತ್ತಿ ಮೇಳಗಳಲ್ಲಿ ಕಲಾ ಸೇವೆಗೈದ ಅಪರೂಪದ ಸಾಧಕರು.

ಗದಾಯುದ್ಧದ ಭೀಮ, ವಲಲ ಭೀಮ, ಕಂಸವಧೆಯ ಕಂಸ, ರಕ್ತಜಂಘ, ಯಮಧರ್ಮ ಮುಂತಾದ ಪಾತ್ರಗಳಿಗೆ ಅಪೂರ್ವವಾಗಿ ಜೀವತುಂಬಿ ಪ್ರಸಿದ್ಧಿಯನ್ನು ಪಡೆದ ಶ್ರೀಯುತರಿಗೆ ಶನೀಶ್ವರ ಮಹಾತ್ಮೆಯ ‘ಶನೀಶ್ವರ’ ಅತ್ಯಂತ ಪ್ರಸಿದ್ಧಿಯನ್ನು ತಂದುಕೊಟ್ಟ ಪಾತ್ರವೆಂದರೆ ತಪ್ಪಾಗಲಾರದು. ಜಲವಳ್ಳಿಯವರು ಇರುವ ಮೇಳಗಳಲ್ಲಿ ‘ಶನೀಶ್ವರ ಮಹಾತ್ಮೆ’ ಪ್ರಸಂಗ ಅತಿಹೆಚ್ಚು ಪ್ರದರ್ಶನಗೊಳ್ಳುತ್ತಿದ್ದುದಲ್ಲದೆ, “ಶನೀಶ್ವರ ಎಂದರೆ ಜಲವಳ್ಳಿ, ಜಲವಳ್ಳಿ ಎಂದರೆ ಶನೀಶ್ವರ” ಎಂಬ ಕಲಾಪ್ರೇಮಿಗಳ ಅಭಿಮಾನದ ಮಾತಿಗೂ ಪಾತ್ರರಾದರು. ಕೆರೆಮನೆ ಶಿವರಾಮ ಹೆಗಡೆ, ಕೊಂಡದಕುಳಿ ರಾಮಲಕ್ಷ್ಮಣ ಹೆಗಡೆ, ಮೂರೂರು ದೇವರು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ ಮುಂತಾದ ಯಕ್ಷದಿಗ್ಗಜರ ಒಡನಾಟ ಹೊಂದಿದ ಜಲವಳ್ಳಿ ಮತ್ತು ಚಿಟ್ಟಾಣಿ ಜೋಡಿ ಯಕ್ಷರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿರುವುದು ಈಗ ಇತಿಹಾಸ.

ಯಕ್ಷಗಾನದ ಶಕ ಪುರುಷ ಶೇಣಿ ಗೋಪಾಲಕೃಷ್ಣ ಭಟ್ಟರ ಒಡನಾಟ ತನ್ನ ಕಲಾ ಬದುಕಿಗೆ ಹೊಸ ತಿರುವು ನೀಡಿತು ಎಂದು ಅಭಿಮಾನದಿಂದ ನುಡಿಯುವ ಜಲವಳ್ಳಿಯವರು ಯಕ್ಷಗಾನ ಯುಗ ಪ್ರವರ್ತಕ ಕಾಳಿಂಗ ನಾವುಡರ ಭಾಗವತಿಕೆಗೆ ವೇಷಗಳನ್ನು ನಿರ್ವಹಿಸಿದ್ದು ವೃತ್ತಿ ಬದುಕಿನ ಅತ್ಯಂತ ಸಂತೃಪ್ತಿಯ ಕ್ಷಣಗಳೆಂದು ಧನ್ಯತೆಯನ್ನು ಹೊಂದುತ್ತಾರೆ. ಪೌರಾಣಿಕ ಪ್ರಸಂಗಗಳ ಕುರಿತು ಹೆಚ್ಚು ಒಲವು ಹೊಂದಿದರೂ ಜಲವಳ್ಳಿಯವರು ಹೊಸ ಪ್ರಸಂಗಗಳ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಯಕ್ಷಪ್ರಿಯರ ಅಭಿಮಾನಕ್ಕೆ ಪಾತ್ರರಾದರು.

ಯಕ್ಷರಂಗದ ಇತಿಹಾಸದಲ್ಲಿಯೇ ಅಪರೂಪವೆನಿಸಿದ 6 ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯನ್ನು ಮಾಡಿದ ಜಲವಳ್ಳಿಯವರ ಸಾಧನೆಯನ್ನು ಮನಗಂಡು ಹತ್ತು ಹಲವು ರಾಜ್ಯ-ಹೊರ ರಾಜ್ಯಗಳ ಸಂಸ್ಥೆಗಳು ಸನ್ಮಾನಿಸಿ ಗೌರವಾದರ ತೋರಿಸಿವೆ. 1989ರ ರಾಜ್ಯ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ, ಅಖಿಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಶ್ರೀಯುತರನ್ನು ಅರಸಿಕೊಂಡು ಬಂದಿವೆ. ಇದೀಗ ನಾಲ್ಕು ವರ್ಷಗಳಿಂದ ವಿಶ್ರಾಂತ ಜೀವನವನ್ನು ನಡೆಸುತ್ತಿರುವ ಜಲವಳ್ಳಿಯವರ ಅನುಭವಾಮೃತವು ಯಕ್ಷರಂಗಕ್ಕೆ ಸದಾ ಸಿಗಲಿ ಎಂಬುದೇ ಯಕ್ಷ ಪ್ರೇಮಿಗಳ ಹಾರೈಕೆ.

ಪ್ರತಿ ವರ್ಷವೂ ಯಕ್ಷಸಾಧಕರಿಗೆ ಕೂಡ ಮಾಡುವ ಬೆಂಗಳೂರಿನ ಯಕ್ಷದೇಗುಲ - 2015 ರ ಪ್ರಶಸ್ತಿಗೆ ಈ ವರ್ಷ ಜಲವಳ್ಳಿ ವೆಂಕಟೇಶ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. 2015 ಡಿಸೆಂಬರ್ 26 ರ ಶನಿವಾರ ಸಂಜೆ 6ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ.




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ